ತಿರುವಣ್ಣಾಮಲೈ
ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ಅದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ.  ಇದು ವಿಲ್ಲಿಪುರಂ ಮತ್ತು ಕಟ್ಟಾಡಿಗಳ ನಡುವೆ ಇರುವ ರೈಲು ನಿಲ್ದಾಣ.  ಮದ್ರಾಸಿನಿಂದ 120 ಮೈ. (190 ಕಿಮೀ.).  ದೂರದಲ್ಲಿ 2,665ಅಡಿ ಎತ್ತರದ ಅರುಣಾಚಲ ಎಂಬ ಬೆಟ್ಟದ ಬುಡದಲ್ಲಿ ಇದೆ.  ಜನಸಂಖ್ಯೆ 61,370 (1971).  ಇಲ್ಲಿ 25 ಎಕರೆ ನೆಲದಲ್ಲಿ ಹರಡಿರುವ ಅರುಣಾಚಲ ದೇವಾಲಯ ತುಂಬ ಪ್ರಸಿದ್ಧವಾದ್ದು.  ಇಲ್ಲಿ ತೇಜೋಲಿಂಗವಿದೆ.  ಕಾರ್ತಿಕೆಯಲ್ಲಿ ಇಲ್ಲಿ ನಡೆಯುವ ದೀಪೋತ್ಸವ ಪ್ರಸಿದ್ಧವಾದದ್ದು.  ಈ ಉತ್ಸವದಲ್ಲಿ ಸಾವಿರಾರು ಯಾತ್ರಿಕರು ಮತ್ತು ಭಕ್ತಜನರು ಭಾಗವಹಿಸುವರು.  ಆ ಸಮಯದಲ್ಲಿ ಬೆಟ್ಟದ ಮೇಲೆ ಜ್ಯೋತಿಯನ್ನು ಬೆಳಗಿಸುತ್ತಾರೆ.  ಇಲ್ಲಿ ಜಾನುವಾರಗಳ ಜಾತ್ರೆಯೂ ನಡೆಯುತ್ತದೆ.

ದೇವಸ್ಥಾನದೊಳಗಿನ ಅನೇಕ ಶಿಲಾಶಾಸನಗಳಿಂದ ಇದರ ಇತಿಹಾಸ ಪ್ರಕಟವಾಗುತ್ತದೆ.  ಇದರ ದೀರ್ಘವಾದ ಚರಿತ್ರೆ ಚೋಳರ, 13ನೆಯ ಶತಮಾನದಲ್ಲಿ ಕಾದವರ (ಕೊಪ್ಪೆರುಂಶಿಂಗಂ ), ಚೇದಿರಾಜರ, 15-16ನೆಯ ಶತಮಾನಗಳಲ್ಲಿ ವಿಜಯನಗರದ ಅರಸರ, 17ನೆಯ ಶತಮಾನದಲ್ಲಿ ವೇಲೂರು ನಾಯಕರ ಮತ್ತು ಆರ್ಕಾಟ್ ನವಾಬರ ಶಾಸನಗಳಿಂದ ಪ್ರತೀತವಾಗುತ್ತದೆ.

ನಗರದ ಮಧ್ಯದಲ್ಲಿ ಕಟ್ಟಲಾದ, ಉನ್ನತ ಗೋಪುರಗಳಿಂದಲೂ ಸಾವಿರ ಕಂಬಗಳ ಮಂಟಪದಿಂದಲೂ ಸುಂದರವಾದ ತಟಾಕ ಮತ್ತು ತೋಟಗಳಿಂದಲೂ ಅಲಂಕೃತವಾದ ದೇವಸ್ಥಾನ, ತಮಿಳು ನಾಡಿನ ದೊಡ್ಡ ದೇವಸ್ಥಾನಗಳಲ್ಲಿ ಒಂದಾಗಿದೆ.  11ನೆಯ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ಕಟ್ಟಲಾದ ಅತ್ಯಂತ ಒಳಗಿನ ಗೋಪುರವನ್ನು ಗಿಣಿ ಗೋಪುರವೆಂದು ಕರೆಯುತ್ತಾರೆ.  ಪೂರ್ವಕ್ಕೆ ನಡುಪ್ರಾಕಾರದಲ್ಲಿ ಇರುವ, ಮೊದಲನೆಯದಕ್ಕಿಂತ ಪ್ರಾಚೀನವಾದ, ವಲ್ಲಾಲ ನಾಮಾಂಕಿತ ಗೋಪುರವನ್ನು ಹೊಯ್ಸಳ ಬಲ್ಲಾಳ ರಾಜ ಕಟ್ಟಿಸಿದನೆಂದು ಹೇಳಲಾಗಿದೆ.  ವಿಜಯನಗರದ ಕೃಷ್ಣದೇವರಾಯ (16ನೆಯ ಶತಮಾನ) ಸಾವಿರ ಕಾಲಿನ ಮಂಟಪ, ದೇವಸ್ಥಾನದ ಹತ್ತಿರಿರುವ ಪುಷ್ಕರಿಣಿ ಮುಂತಾದವನ್ನು ಕಟ್ಟಿಸಿದನೆಂದು ದೇವಸ್ಥಾನದ ಶಿಲಾಶಾಸನಗಳಿಂದ ತಿಳಿದುಬರುತ್ತದೆ. 16ನೆಯ ಶತಮಾನದಲ್ಲಿ ತಂಜಾವೂರಿನ ಶಿವಪ್ಪನಾಯಕ ದೇವಸ್ಥಾನದ ಪೂರ್ವದಿಶೆಯಲ್ಲಿರುವ ಹನ್ನೊಂದು ಅಂತಸ್ತುಗಳ ಗೋಪುರವನ್ನು ಕಟ್ಟಿಸಿದ.	
			(ಕೆ.ವಿ.ಆರ್‍ಎ.)
ದೇವಾಲಯದ ಸಮೀಪದಲ್ಲಿ ರಮಣಾಶ್ರಮವಿದೆ.  ದಕ್ಷಿಣ ಭಾರತದ ಪ್ರಸಿದ್ಧ ಸಂತರಲ್ಲೊಬ್ಬರಾದ ರಮಣ ಮಹರ್ಷಿಗಳು (1879-1950) ಈ ಆಶ್ರಮವನ್ನು ಸ್ಥಾಪಿಸಿದರು.  ಅದ್ವೈತ ಮತಾವಲಂಬಿಗಳಾದ ಇವರು ತಮ್ಮ ಜೀವನದ ಬಹು ಭಾಗವನ್ನು ಕಳೆದುದು ತಿರುವಣ್ಣಾಮಲೈಯಲ್ಲೇ.

ತಿರುವಣ್ಣಾಮಲೈ ಹಲವು ರಸ್ತೆಗಳ ಸಂಧಿಸ್ಥಳ.  ಇದು ಪ್ರಮುಖ ವ್ಯಾಪಾರ ಕೇಂದ್ರವೂ ಹೌದು.  ಬತ್ತ, ಶ್ರೀಗಂಧ, ಜೋಳ, ಮಾವಿನ ಹಣ್ಣು, ಚರ್ಮದ ಸಾಮಗ್ರಿಗಳು ಇಲ್ಲಿ ಮಾರಾಟವಾಗುತ್ತವೆ.

ತಿರುವಣ್ಣಾಮಲೈ 18ನೆಯ ಶತಮಾನದಲ್ಲಿ ಒಂದು ಪ್ರಮುಖ ಸೈನಿಕ ಠಾಣೆಯಾಗಿತ್ತು.  ಇಲ್ಲಿಯ ಬೆಟ್ಟ ಕರ್ಣಾಟಕ ಯುದ್ಧಗಳಲ್ಲಿ ಪ್ರಧಾನಪಾತ್ರ ನಿರ್ವಹಿಸಿತು.  1753-1790ರ ಅವಧಿಯಲ್ಲಿ ಈ ನಗರ ಅನೇಕ ಮುತ್ತಿಗೆಗಳಿಗೆ ಗುರಿಯಾಗಿತ್ತು.

1896ರಲ್ಲಿ ತಿರುವಣ್ಣಾಮಲೈಯಲ್ಲಿ ಪೌರಸಭೆ ಸ್ಥಾಪಿತವಾಯಿತು.

ತಿರುವಣ್ಣಾಮಲೈ ತಾಲ್ಲೂಕು ಉ. ಅ. 11000 58' 120 35' ಮತ್ತು ಪೂ. ರೇ. 78038'- 79017' ನಡುವೆ ಇದೆ.  ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ತೆನ್‍ಮಲೈ (ದಕ್ಷಿಣ ಬೆಟ್ಟಗಳು) ಎಂದು ಕರೆಯಲ್ಪಡುವ, ಉತ್ತರ ಅರ್ಕಾಟಿನ ಚಾವಡಿ ಪರ್ವತಶ್ರೇಣಿಯ ಒಂದು ಭಾಗ ಚಾಚಿಕೊಂಡಿದೆ.  ದಕ್ಷಿಣದಲ್ಲಿ ಚೆಕ್ಕಾಡಿ ಅಥವಾ ಕಲ್ರಾಯನ್ ಬೆಟ್ಟಗಳಿವೆ.

ಶ್ರೀಗಂಧ ಹಾಗೂ ತೇಗದ ಮರಗಳಿಗೆ ಈ ತಾಲ್ಲೂಕು ಪ್ರಸಿದ್ಧ.  ಮರ ಮುಟ್ಟುಗಳಿಗಾಗುವ ಇನ್ನಿತರ ಮರಗಳೂ ಉಂಟು.  ಹೆಚ್ಚಿನ ಕಾಡುಗಳನ್ನು ರಕ್ಷಿಸಲಾಗಿದೆ.  ಉತ್ತರ ಆರ್ಕಾಟ್ ಜಿಲ್ಲೆಯಲ್ಲೇ ವಿರಳ ಜನಸಾಂದ್ರತೆ ಇರುವ ಹಾಗೂ ಅತಿ ಕಡಿಮೆ ಮಳೆ ಬೀಳುವ ತಾಲ್ಲೂಕು ತಿರುವಣ್ಣಾಮಲೈ.  ವಾರ್ಷಿಕ ಮಳೆ 36" (ಜಿಲ್ಲೆಯ ಸರಾಸರಿ 43") . ತಾಲ್ಲೂಕಿನ ವಿಸ್ತೀರ್ಣ ಸುಮಾರು 1,000 ಚ.ಮೈ.							(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ